ಯುರೋಪ್ ಪ್ರವಾಸ-ನದಿ’ಸೇನ್’ನಲ್ಲಿ ದೋಣೀವಿಹಾರ, ಮರಳಿ ಕ್ಯಾಲೀಸ್‍ನಿಂದ ಲಂಡನ್‍ಗೆ
ಆಗಸ್ಟ್ 19:- ಅಂದು ನಮ್ಮ ಟೂರ್ ಕೊನೆಯದಿನ, ಆವತ್ತು ನಮ್ಮನ್ನು ಪಾರೀಸ್ ನಗರದ ಅತೀ ದೊಡ್ಡ ನದಿ ’River seine’ ನಲ್ಲಿ ಊರು ತೋರಿಸಲು ಕರೆದುಕೊಂಡು ಹೋದರು, ಹಿಂದಿನ ದಿನದಷ್ಟು ಬಿಸಿಲಿರಲಿಲ್ಲವಾದ್ದರಿಂದ ಆ ತಂಪು ಹವೆಯಲ್ಲಿ ದೋಣಿ ವಿಹಾರ(cruse on the River Seine) ತುಂಬಾ ಹಿತವಾಗಿತ್ತು. ಆ ದೋಣಿ ರೈಡ್‍ಕೂಡಾ ’ಐಫಲ್ ಟವರ್’ ಪಕ್ಕದಲ್ಲೇ ಇದ್ದುದರಿಂದ ಆ ಟವರ್ ಫೋಟೋ ತೆಗೆದುಕೊಳ್ಳಲು ತುಂಬಾ ಅನುಕೂಲವಾಗಿತ್ತು, ಮತ್ತು ಬೆಳಗಿನಲ್ಲಿ ಅದನ್ನು ಚೆನ್ನಾಗಿ ನೋಡಲು ಅನುಕೂಲವೂ ಆಗಿತ್ತು. ಪೂರಾ ಒಂದು ಸುತ್ತು ತಿರುಗಿಸಿ ಮತ್ತೆ ನಮ್ಮನ್ನು ಕರೆತಂದು ಹತ್ತಿದ ಜಾಗದಲ್ಲೇ ತಂದು ಬಿಡುತ್ತಾರೆ. ತುಂಬಾನೇ ಚೆನ್ನಾಗಿತ್ತು ಆ ದೋಣಿ ವಿಹಾರ.
ನಂತರ ಅಲ್ಲಿಂದ ಹೊರಟು ನಮ್ಮನ್ನು ಶಾಪಿಂಗ್ ಮಾಡಲು ಒಂದು ದೊಡ್ಡ ಜಾಗಕ್ಕೆ ಕರೆದುಕೊಂಡು ಹೋದಳು ನಮ್ಮ ಮ್ಯಾನೇಜರ್, ಎಲ್ಲರೂ ಫ್ರೆಂಚ್ ಪರ್‍ಫ್ಯೂಮ್ ಕೊಳ್ಳಲು ಯೋಜಿಸಿದ್ದರು, ಅಲ್ಲಿಯ ಬೆಲೆ ನೋಡಿ ಎಲ್ಲರೂ ತೆಪ್ಪಗೆ ವಾಪಸ್ ಬಂದಿದ್ದಾಯ್ತು. ನಂತರ ಬೇರೆ ಬೇರೆ ಅಂಗಡಿಗಳಲ್ಲಿ ಚಿಕ್ಕಪುಟ್ಟ ವಸ್ತುಗಳನ್ನು ಖರೀದಿಸಿ ಕೋಚ್ ತಲುಪಿದಾಗ ಊಟಕ್ಕೆ ಎಲ್ಲಾ ತಯಾರಾಗಿತ್ತು. ಊಟ ಮುಗಿಸಿ ಕೋಚ್ ಹತ್ತಿದಾಗ ಎಲ್ಲರ ಮುಖದಲ್ಲೂ ಒಂದು ಬಗೆಯ ನಿರಾತಂಕ ಮತ್ತು ಬೇಸರ ಎರಡೂ ಮನೆ ಮಾಡಿತ್ತು, ಒಂದು ಎಲ್ಲವೂ ಅಂದು ಕೊಂಡಂತೆ ಯಾವ ತೊಂದರೆಯೂ ಇಲ್ಲದೆ ಪ್ರವಾಸ ಮುಗಿದದ್ದಾದರೆ ಇನ್ನೊಂದು ಅಲ್ಲಿಯವರೆಗೂ ಎಲ್ಲರೂ ಒಂದೇ ಅನ್ನುವಷ್ಟು ಸ್ನೇಹಿತರಾಗಿದ್ದವರೆಲ್ಲಾ ಈಗ ಬಿಟ್ಟಗಲಬೇಕಲ್ಲ ಅಂತ.
ಸರಿ ಅಲ್ಲಿಂದ ಮತ್ತೆ ’calais’ ಗೆ ಹೊರಟೆವು, ಇಡೀ ಯುರೋಪ್ ಒಂದು ಉಂಡೆಯಂತೆ ಸುತ್ತಿ ಬೇರೊಂದು ಮಾರ್ಗದಿಂದ ಮತ್ತೆ ಕ್ಯಾಲೇಸ್ ಗೆ ಬಂದ್ವಿ. ಸರಿ ದಾರಿಯಲ್ಲಿ ಬರುತ್ತಾ ಎಲ್ಲರೂ ತಮ್ಮ ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು. ಅಲ್ಲಿಂದ london dover ಗೆ ಬಂದು ಪುನಃ ಅದೇ ದೊಡ್ಡ ಹಡಗಿನಲ್ಲಿ ಬಸ್ ಸಮೇತ ಒಳಗೆ ಬಂದು ಆ ಕಡೆಯಿಂದ ಹೊರಟು ಮತ್ತೆ London ತಲುಪಿದಾಗ ರಾತ್ರಿಯಾಗಿತ್ತು. ಎಲ್ಲರೂ ಎಲ್ಲರಿಂದ ಬೀಳ್ಕೊಂಡಿದ್ದಾಯಿತು.
ಮಾರನೇ ದಿನ ನಾವು usa ಗೆ ಪ್ರಯಾಣ ಮಾಡಲು ರಾತ್ರಿಯೇ ನಮ್ಮ ಲಗೇಜ್‍ಗಳನ್ನು ರೆಡಿ ಮಾಡಿಟ್ಟು ಬೆಳಿಗ್ಗೆ ಎದ್ದು ಹೋಟೇಲ್‍ನಲ್ಲೆ ತಿಂಡಿ ವ್ಯವಸ್ಥೆ ಇದ್ದದ್ದರಿಂದ ಅದನ್ನ ಮುಗಿಸಿ ಏರ್‍ಪೋರ್ಟ್ ಸೇರಿ ನಮ್ಮ ವಿಮಾನ ಹಿಡಿದು ಊರು ಸೇರಿದೊಡನೆಯೇ ಅಷ್ಟು ದಿನ ಇಲ್ಲದ ಸುಸ್ತು ಆವರಿಸಿಬಿಟ್ಟಿತ್ತು. ಊಟ ನಿದ್ದೆ ಮತ್ತೆ ಮಾಮೂಲಿಗೆ ಬರಲು ಸರಿಯಾಗಿ ಒಂದು ತಿಂಗಳು ಹಿಡಿಯಿತು. ಒಂದೊಂದು ಊರನ್ನು ನೋಡಲು ಹೋಗುವಾಗ ಬೆಳಿಗ್ಗೆ 5ಕ್ಕೆ ಎದ್ದು ಓಡುವುದು ರಾತ್ರಿ 11ಕ್ಕೆ ಬಂದು ಮಲಗುವುದು, ಅದು ಹೇಗೆ ಆ ರೀತಿ ಮಾಡುತ್ತಿದ್ದೆವೋ,ಅಷ್ಟೋಂದು ತ್ರಾಣ ಎಲ್ಲಿಂದ ಬರ್ತಿತ್ತೋ ಆ ದೇವರಿಗೇ ಗೊತ್ತು. ಅಂತೂ ಈ ಯುರೋಪ್ ಯಾತ್ರೆ ನನ್ನ ಪಾಲಿಗೆ ಒಂದು ಮರೆಯಲಾಗದ ಸುಂದರ ಕನಸಾಗಿದೆ ಅನ್ನಬಹುದು.
ನನಗೆ ಹೀಗೂ ಅನ್ನಿಸಿತ್ತು ನಾವು ಯುರೋಪ್ ನಂತರ ಇಂಡಿಯಾ ಪ್ರವಾಸ ಮಾಡ್ಬೇಕಿತ್ತು ಅಂತ, ಯಾಕೇಂದ್ರೆ ಇಲ್ಲಿ ಬಂದು ಸುಸ್ತು ಆಯಾಸ ಮತ್ತು ಸಮಯದ ವ್ಯತ್ಯಾಸದಿಂದ ಯಾವಾಗೆಂದರೆ ಆವಾಗ ನಿದ್ದೆ, ಹಸಿವು. ಅಲ್ಲಾಗಿದ್ದರೆ ಅಮ್ಮ ಹೊತ್ತು ಹೊತ್ತಿಗೆ ಅಡಿಗೆ ತಿಂಡಿ ಮಾಡ್ತಿದ್ಲು ಇಲ್ಲಿ ಎಲ್ಲಾ ನಾನೇ ಮಾಡ್ಕೊಂಡು ಸುಧಾರಿಸಿಕೊಳ್ಳೋ ಹೊತ್ತಿಗೆ ಯುರೋಪ್‍ನಲ್ಲಿ ಏನು ನೋಡಿದ್ದೇ ಅನ್ನೋದೇ ಮರೆತು ಹೋಗೋ ಸ್ಥಿತಿಗೆ ಬಂದು ತಲುಪಿದ್ದೆ. ಯಾರಾದರೂ ಈ ರೀತಿ ಯುರೋಪ್ ಪ್ರವಾಸ ಮಾಡೋದಿದ್ದರೆ ಮೊದಲು ಅದನ್ನ ಮುಗಿಸಿ ನಂತರ ಇಂಡಿಯಾಗೆ ಹೋಗಿ ಆರೈಕೆ ಮಾಡಿಸಿಕೊಳ್ಳೋದು ಉತ್ತಮ ಅನ್ನೋದು ನನ್ನ ಒಂದು ಸಲಹೆ. ಮತ್ತೆ ಯಾರಾದರೂ ಯುರೋಪ್ ಪ್ರವಾಸ ಮಾಡಿದೋರಿದ್ದು ಏನಾದರೂ ತಪ್ಪಾಗಿದ್ದರೆ ತಿದ್ದಬಹುದು ಕೂಡಾ.


